ಕಾಕಿನಾಡ

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಹಿಂದೆ ಇದಕ್ಕೆ ಕೋಕನಾಡ ಎಂಬ ಹೆಸರಿತ್ತು. ಗೋದಾವರಿ ನದೀಮುಖಜಭೂಮಿಯ ಈಶಾನ್ಯ ತುದಿಯಲ್ಲಿದೆ. ವಿಸ್ತೀರ್ಣ 9.47 ಚ.ಮೈ. ಜನಸಂಖ್ಯೆ 1,22,865 (1961). ಕಾಕಿನಾಡ ಪುರಸಭೆ ಸ್ಥಾಪಿತವಾದ್ದು 1866ರಲ್ಲಿ. ಭರತದ (ಸಮುದ್ರದ ಉಬ್ಬರದಿಂದ ಸಂಭವಿಸಿದ) ನದಿಯಾಚೆ ಇರುವ ಜಗನ್ನಾಥಪುರ ಉಪನಗರಕ್ಕೂ ಪಟ್ಟಣದ ಮುಖ್ಯ ಭಾಗಕ್ಕೂ ಹೆದ್ದಾರಿಯುಂಟು. ಜಗನ್ನಾಥಪುರವನ್ನು 1628ರಲ್ಲಿ ಡಚ್ಚರು ನಿರ್ಮಿಸಿದರು. 1825ರಲ್ಲಿ ಅದು ಇಂಗ್ಲಿಷರ ವಶವಾಯಿತು. 1839ರಲ್ಲಿ ಭರತದ ಅಲೆಯಿಂದ ಅದು ನಾಶವಾಗಿತ್ತು.

ಕಾಕಿನಾಡದಲ್ಲಿ ಕಲೆ, ವಿಜ್ಞಾನ, ತಾಂತ್ರಿಕ ಮತ್ತು ವೈದ್ಯಕ ಕಾಲೇಜುಗಳೂ ಆಧುನಿಕವಾಗಿ ಸಜ್ಜಾದ ದೊಡ್ಡ ಆಸ್ಪತ್ರೆಯೂ ಇವೆ.

ಕಾಕಿನಾಡ ಕೊಲ್ಲಿಯ ಲಂಗರುದಾಣ ಆಳವಾಗಿಲ್ಲ. ಹಡಗುಗಳು ಏಳು ಮೈಲಿಗಳಾಚೆ ಲಂಗರು ಹಾಕಿ ನಿಲ್ಲಬೇಕು. ದಕ್ಷಿಣ ರೈಲ್ವೆಯ ಸಮಲ್ಕೋಟ್ ನಿಲ್ದಾಣದಿಂದ ಕಾಕಿನಾಡಕ್ಕೆ ಕವಲು ರೈಲುಮಾರ್ಗವುಂಟು. ಗೋದಾವರಿ ಮುಖಜಭೂಮಿಯ ಕಾಲುವೆ ವ್ಯವಸ್ಥೆಯೊಂದಿಗೆ ಧವಿಶೇಶ್ವರಂ ಬಳಿ ಕಾಕಿನಾಡ ಕಾಲುವೆಯ ಮೂಲಕ ಸಂಪರ್ಕ ಏರ್ಪಟ್ಟಿದೆ. ಕಾಕಿನಾಡದಿಂದ ರಫ್ತಾಗುವ ಪದಾರ್ಥಗಳು ಅಕ್ಕಿ. ಎಣ್ಣೆಬೀಜ, ಹೊಗೆಸೊಪ್ಪು ಮತ್ತು ಹತ್ತಿ. ಜವಳಿ, ಅಕ್ಕಿ ಮತ್ತು ಎಣ್ಣೆ ಗಿರಣಿಗಳು ಇಲ್ಲಿವೆ.

 

(ಎಂ.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ